top of page

ಬುಕ್ ಕ್ಲಬ್ - ಜಾಗೃತಿಯೊಂದಿಗೆ / Book Club - Jagruti Edition

  • Writer: Pooja Dabade
    Pooja Dabade
  • Jun 5, 2025
  • 2 min read

ಪ್ರತಿಯೊಂದು ಮಗುವೂ ಓದುವ ಹುಚ್ಚನ್ನು ಬೆಳೆಸಿಕೊಳ್ಳಬೇಕೆಂಬುದು ನನ್ನ ಕನಸು. ಕಾನ್ಪುರದ ಬುಕ್ ಕ್ಲಬ್ ನ ಯಶಸ್ಸು ಈ ದಿಕ್ಕಿನಲ್ಲಿ ಇನ್ನೂ ಕೆಲಸ ಮಾಡಬೇಕೆಂದು ನನ್ನನ್ನು ಪ್ರೋತ್ಸಾಹಿಸಿತು.


ಈ ಸಲ ಧಾರವಾಡಕ್ಕೆ ಬಂದಾಗ ಮಂಗೇನಕೊಪ್ಪದ "ಜಾಗೃತಿ"ಯಲ್ಲಿ ಬುಕ್ ಕ್ಲಬ್ ಬಗ್ಗೆ ಚರ್ಚೆಯನ್ನು ಇಟ್ಟುಕೊಂಡಿದ್ದೆವು. ಈ ಚರ್ಚೆ ಮಕ್ಕಳಿಗಾಗಿ ಇರಲಿಲ್ಲ. ಪಾಲಕರಿಗೆ ಮತ್ತು ಮಕ್ಕಳೊಂದಿಗೆ ಸಮುದಾಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗಾಗಿ ಆಗಿತ್ತು. ಮಕ್ಕಳೊಂದಿಗೆ ನಾವು ಆಸಕ್ತಿದಾಯಕವಾಗಿ, ಬೇಸರವಾಗದಂತೆ, ಮಜವಾಗಿ, ಖುಷಿ ಕೊಡುವಂತೆ, ಒತ್ತಾಯ ಮಾಡದೆ, ನಮಗೂ ಸಂತೋಷವೆನಿಸುವಂತೆ ಹೇಗೆ ಪುಸ್ತಕಗಳನ್ನು ಓದಬೇಕು, ಪುಸ್ತಕ ಸಂಬಂಧಿತ ಚಟುವಟಿಕೆಗಳನ್ನು ಮಾಡಿಸಬೇಕು, ಬುಕ್ ಕ್ಲಬ್ ನಲ್ಲಿ ಎಷ್ಟು ಮಕ್ಕಳಿರಬೇಕು, ಎಷ್ಟು ದಿನಕ್ಕೊಮ್ಮೆ ಕೂಡಬೇಕು, ಯಾವ ತರಹದ ಪುಸ್ತಕಗಳನ್ನು ಆಯ್ದುಕೊಳ್ಳಬೇಕು, ಮೊಬೈಲುಗಳನ್ನು ಹೇಗೆ ಮತ್ತು ಯಾಕೆ ಮಕ್ಕಳಿಂದ ದೂರ ಇಡಬೇಕು, ಇವೆಲ್ಲ ಚರ್ಚೆ ಆಯಿತು. ಜಾಗೃತಿ ಈಗಾಗಲೇ ಕೂಡಿ ಹಾಕಿರುವ ಮಕ್ಕಳ ಸುಂದರವಾದ ಪುಸ್ತಕಗಳ ಗ್ರಂಥಾಲಯ ಈ ಚರ್ಚೆಗೆ ಪೂರಕವಾಗಿತ್ತು.




ಭಾಗವಹಿಸಿದವರಲ್ಲಿ ಬಹಳಷ್ಟು ಪಾಲಕರಿದ್ದಿದರಿಂದ ಅವರು ಇನ್ನೊಂದು ಸಲ ನಾವೆಲ್ಲ ಭೇಟಿಯಾಗೋಣ, ಈ ಸಲ ತಮ್ಮ ಮಕ್ಕಳನ್ನೂ ಕರೆದುಕೊಂಡು ಬರುತ್ತೇವೆ, ನೀವೇ ಅವರಿಗೆ ಕಥೆ ಹೇಳಿ ಅಂತ ಹೇಳಿದರು. ಹೀಗಾಗಿ ಮತ್ತೆ ಭೇಟಿ ಆದೆವು. ಈ ಸಲ ಚಿಣ್ಣರೊಂದಿಗೆ. ಐದು ವರ್ಷದಿಂದ ಹದಿನೈದು ವರ್ಷದವರೆಗೂ ಮಕ್ಕಳಿದ್ದರು. ಮಜವಾದ (ನನಗಿಷ್ಟವಾದ), ಚೆಂದದ ಚಿತ್ರಗಳಿರುವಂತಹ ಕಬೀರನ ಎರಡು ಪುಸ್ತಕಗಳನ್ನು ಆಯ್ದುಕೊಂಡು, ಅವುಗಳ ಕಥೆಗಳನ್ನು ಚಿತ್ರ ತೋರಿಸುತ್ತ ಹೇಳಿದೆ. ಮಕ್ಕಳಿಗೆ ಇಷ್ಟವಾದಂತೆ ಕಂಡಿತು. ಅವುಗಳಲ್ಲಿ ಒಂದು ಪುಸ್ತಕ ಚಿಂತೆಯ ಬಗ್ಗೆ ಇತ್ತು. ಹಾಗಾಗಿ ಮಕ್ಕಳೊಂದಿಗೆ ಚಿಂತೆ, ಭಾವನೆಗಳು, ಭಾವನೆಗಳಿಗೆ ಹೇಗೆ ನಾವು ಸ್ಪಂದಿಸುತ್ತೇವೆ ಇವುಗಳ ಬಗ್ಗೆ ಚರ್ಚೆ ಆಯಿತು. ಚರ್ಚೆ ಬಹಳ ಸುಗಮವಾಗಿ ನಡೆಯಿತು. ಮಕ್ಕಳ ಮಜವಾದ ಪ್ರತಿಕ್ರಿಯೆಗಳು ರೋಚಕವಾಗಿದ್ದವು.


ಸಮುದಾಯದಲ್ಲಿ ಬುಕ್ ಕ್ಲಬ್ ಹೇಗೆ ನಡೆಸಬೇಕೆಂದು ಈಗಾಗಲೇ ಚರ್ಚೆ ಆಗಿದ್ದರಿಂದ, ಈ ಸಲ ನಮ್ಮ ಮಕ್ಕಳಿಗೆ ನಾವು ಹೇಗೆ ಪುಸ್ತಕಗಳ ಮೂಲಕ ಸಮಯ ಕೊಡಬೇಕೆಂಬುದರ ಬಗ್ಗೆ ಮಾತನಾಡಿದೆವು. ಮಕ್ಕಳಿಗೆ ಜಾಗೃತಿ ಅಥವಾ ಬೇರೆ ಗ್ರಂಥಾಲಯಗಳಿಂದ ಪುಸ್ತಕ ತರಿಸುವುದು, ತಿಂಗಳಿಗೊಮ್ಮೆಯಾದರೂ ಹೊಸ ಪುಸ್ತಕಗಳನ್ನು ಕೊಡಿಸುವುದು, ಪ್ರತಿದಿನ ಅರ್ಧ ತಾಸಾದರೂ ಮಕ್ಕಳೊಂದಿಗೆ ಓದುವುದು, ಓದುವಾಗ ಪ್ರೀತಿಯಿಂದ ನಗುತ್ತಾ ನಗಿಸುತ್ತಾ ಕಥೆ ಹೇಳುವುದು, ಓದಿದ ಕಥೆಗಳ ಮೇಲೆ ಸಂವಾದ ಮಾಡುವುದು ಇವೆಲ್ಲ ಹೇಗೆ ಮಾಡಬಹುದು ಎಂದು ಮಾತಾಡಿದೆವು. ಪುಸ್ತಕ ಓದುವುದೆಂದರೆ ಒಂದು ರೋಬಾಟ್ ಸಾಲುಗಳನ್ನು ಓದಿದಂತೆ ಓದಿದರೆ ಯಾರಿಗೂ ಪುಸ್ತಕವನ್ನು ಓದಬೇಕೆಂದು ಮನಸ್ಸಾಗುವುದಿಲ್ಲ, ಮಕ್ಕಳೊಂದಿಗೆ ನಾವೂ ಮಕ್ಕಳಾಗಿ ಮಜ ಮಜ ಧ್ವನಿ ಮಾಡುತ್ತ, ಒಬ್ಬರಿಗೊಬ್ಬರು ಪ್ರಶ್ನೆ ಕೇಳುತ್ತ, ತಮಾಷೆ ಮಾಡುತ್ತ ಓದಿದರೆ, ಮಕ್ಕಳಿಗೆ ಸಹಜವಾಗಿ ಪುಸ್ತಕಗಳ ಮೇಲೆ ಒಲವು ಬರುತ್ತದೆ. ಮತ್ತು ಈ ನೆನಪುಗಳು ಅವರಿಗೆ ತಮ್ಮ ಜೀವನದುದ್ದಕ್ಕೂ ಪುಸ್ತಕಗಳ ಮೇಲೆ ಒಲವಿರುವಂತೆ ಮಾಡುತ್ತದೆ.


ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅವರ ಜವಾಬ್ದಾರಿ ಅಲ್ಲ, ಅದು ನಮ್ಮದು. ಎಲ್ಲ ಪಾಲಕರೂ ತಾವು ಮಕ್ಕಳೊಂದಿಗೆ ಇದೊಂದು ಪ್ರಯತ್ನ ಮಾಡುತ್ತೇವೆಂದು ಭಾಷೆ ಕೊಟ್ಟಿದ್ದಾರೆ. ಆ ಭಾಷೆಯನ್ನು ಉಳಿಸಿಕೊಳ್ಳುತ್ತಾರೆಂದು ಆಶಿಸುತ್ತೇನೆ.


Jagruti is a registered independent, non profit, non government organisation working towards organising and empowering the community. If you would like to contribute to Jagruti - http://jagruti.org/#contribute

 
 
 

Comments


  • Facebook
  • Instagram
bottom of page